January 26, 2010

ಸುವಾಸನೆಯ ಮಳೆ

ಡಿಸೆಂಬರಿನ ಒಂದು ದಿನ ಬೆಳೆಗ್ಗೆ ಸುಮಾರು 6-6:30ಕ್ಕೆ ಮಳೆರಾಯನಿಗೆ ಏನಾಯ್ತೋ ಏನೋ ನಮಗೆಲ್ಲ ಒಂದು ಶಾಕ್ ಕೊಡಲಿಕ್ಕೆ ಅಂತ ಭೂಮಿಗೆ ವಿಹಾರಕ್ಕೆ ಬಂದ. ಅದೂ ತನ್ನ ಸಂಸಾರ ಸಮೇತ (ಗುಡುಗು, ಸಿಡಿಲು). ಶಾಕ್ ಯಾಕೆ ಅಂತ ಅಂದ್ರೆ ಇಲ್ಲಿ ಉಡುಪಿಲಿ ಎಷ್ಟೇ ಜಾಸ್ತಿ ಮಳೆ ಇದ್ರೂ ತೀರಾ ಡಿಸೆಂಬರಲ್ಲಿ ಮಳೆ ಬರಲ್ಲ. ಆದ್ರೆ ಅವತ್ತು ಬಂತು. ಆಗಾಗಲೇ ಎದ್ದಿದ್ದ ನಾನು ಕಿಟಿಕಿ ಆಚೆ ನೋಡಿದೆ. ಸುರಿಯುತ್ತಿದ್ದ ಮಳೆಗೆ ನೆನೆಯುತ್ತಿದ್ದ ನೆಲ ಕಾಣಿಸ್ತು. ಅಷ್ಟೇ ಅಲ್ದೇ ಮಳೆ ಬರುವಾಗ ಅದರ ಜೊತೆ ತರುವ ಮಣ್ಣಿನ ಸುವಾಸನೆಯೂ ಬಂತು.

ಉಡುಪಿಯ ಮೂರುವರೆ ವರ್ಷದ ವಾಸದಲ್ಲಿ ಈ ಮಣ್ಣಿನ ಸುವಾಸನೆ ಬಂದಿದ್ದು ತೀರ ಅಪರೂಪ. ನನ್ನ ನೆನಪಿನ ಮಟ್ಟಿಗೆ ಇದು ನನ್ನ ಮೊದಲ ಅನುಭವ. ಅದಕ್ಕೆ ನನಗೆ ಆ ಮಣ್ಣಿನ ಸುವಾಸನೆ ಬರ್ತಿದ್ದ ಹಾಗೇನೆ  ಬಳ್ಳಾರಿಯ ನೆನೆಪಾಯಿತು. ಯಾಕಂದ್ರೆ ಅಲ್ಲಿ ಪ್ರತಿ ಮಳೆಯ ಜೊತೆಗೂ ಈ ಸುವಾಸನೆ ಇರತ್ತೆ. ಅಲ್ಲಿನ  ಬಿಸಿಯಾದ ಭೂಮಿಗೆ ಮಳೆಯ ಮೊದಲ ಕೆಲವು ಹನಿಗಳ ಸ್ಪರ್ಶಕ್ಕೆ ಖುಷಿ ಅಷ್ಟಿಷ್ಟಲ್ಲ, ಅದಕ್ಕಾಗೋ ಖುಷಿಗೆ ಭೂಮಿ ನಮಗೆಲ್ಲ ಸುವಾಸನೆಯನ್ನು ಪ್ರಸಾದಿಸುತ್ತೆ.


ಎಲ್ರಿಗೂ ತಿಳಿದಿರೋ ಹಾಗೆ ಬಳ್ಳಾರಿಯಲ್ಲಿ ಉಡುಪಿಗಿಂತ ತೀರ ಕಡಿಮೆ ಮಳೆ. ಇಲ್ಲಿಗೂ ಅಲ್ಲಿಗೂ ಮಳೆಯ ಪ್ರಮಾಣ ಹೋಲಿಸೋದೆ ದಡ್ಡತನ. ಮನೆಗೆ ಯಾವಾಗಲೋ ಬರುವ ಅತಿಥಿಯಿಂದ ಆಗೋ ಸಂತೋಷವೇ ಬೇರೆ. ಆ ಥರದ ಖುಷಿ ಬಳ್ಳಾರಿಯ ಮಣ್ಣಿಗಾಗೋದರಿಂದ ಆ ಸಂತೋಷನಾ ಅಲ್ಲಿಯ ಮಣ್ಣು ಇಡೀ ಊರಿಗೆ ಹಂಚುತ್ತೆ, ಸುವಾಸನೆಯ ರೂಪದಲ್ಲಿ.

ಇಲ್ಲಿ ಮಳೆ ಯಾರಿಗೂ ಹೊಸತಲ್ಲ. ಅದಕ್ಕಾಗಿ ಯಾರೂ ಕಾಯೋಲ್ಲ. ಮಳೆ ಬಂದ್ರೆ ಇಲ್ಲಿ ಅಂತಹದ್ದು ಆಗಬಾರದ್ದೇನು ಆಗೋಲ್ಲ. ಅಲ್ಲಿ ಇಲ್ಲಿಯ ಉಲ್ಟಾ. ಅಲ್ಲಿ ಮಳೆ ಬಂದ್ರೆ ಇಡೀ ಊರಿಗೆ ಊರೇ ಕೆಲಸ ನಿಲ್ಲಿಸಿಬಿಡುತ್ತೆ. ಜನರ ಜೀವನಾನೆ  ಮುಂದೆ ಸಾಗೋಲ್ಲ.  ಆಹೊತ್ತಿನ  ಎಲ್ಲ ಕೆಲಸ ಕಾರ್ಯಗಳನ್ನು ಸ್ವಲ್ಪ ಹೊತ್ತು ಮುಂದೂಡಿ, ಮಂಡಾಳು  ವಗ್ಗರಣಿ, ಮಿರ್ಚಿ ಮಾಡ್ಕೊಂಡು (ಅಥವಾ ಕೊಂಡ್ಕೊಂಡು)  ಜನ ಮಳೇನ ಆನಂದಿಸ್ತಾರೆ. ಅದರ ಜೊತೆ ಮಳೆಯ ಸುವಾಸನೇನೂ ಸವಿತಾರೆ.
ಇಲ್ಲಿ ಮಳೆ ಬಂದ್ರೆ ನಿಲ್ಲಲ್ಲ ಅಂತ ಯಾರೂ ಅದರ ಬಗ್ಗೆ ತಲೆ ಕೆಡಿಸಕೊಳ್ಳದೆ ತಂತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಒಂಥರ ಇಲ್ಲಿ ಮಳೆಗೆ ಅಲ್ಲಿಯ ಜನ ಕೊಡುವಷ್ಟು ಮರ್ಯಾದೆ, ಬೆಲೆ ಇಲ್ಲ, ಅದಕ್ಕೆ ಸುವಾಸನೆಯ ಪ್ರಸಾದ ಯಾರಿಗೂ ಇಲ್ಲ.

ಇಲ್ಲಿ ಅಷ್ಟೊಂದು ಮಳೆ ಬೇಡ, ಅಲ್ಲಿ ಅಷ್ಟು ಮಳೆ ಸಾಕಾಗಲ್ಲ (ಈ ಬಾರಿಯ ನೆರೆ ಹೊರತುಪಡಿಸಿದರೆ ಪ್ರತಿ ಬಾರಿನೂ ಅಲ್ಲಿ ಜನಕ್ಕೆ ಬೇಕಾಗೊಕ್ಕಿಂತ ಕಮ್ಮೀನೇ ಬರೋದು. ಈ ಬಾರಿಯ ಥರದ ಮಳೆ ಇನ್ನೆಂದಿಗೂ ಬೇಡ ಕೂಡ). ನಿಸರ್ಗ ಇಷ್ಟು ತಾರತಮ್ಯ ಮಾಡೋದು ಬಿಟ್ಟು ಇಲ್ಲಿ ಸ್ವಲ್ಪ ಮಳೆ ಕಡಿಮೆ ಮಾಡಿ, ಅಲ್ಲಿ ಸ್ವಲ್ಪ ಮಳೆ ಜಾಸ್ತಿ ಮಾಡಿದ್ರೆ ಎಷ್ಟು ಚೆನ್ನಾಗಿರುತಿತ್ತು ಅಲ್ವಾ?
ಹಾಗಿದ್ದಿದ್ರೆ ಜನರ ಜೀವನ ಆರಾಮಗಿರೋದು.  ಆ ಸುವಾಸನೇನ ನಾನು ನೆನಸಕೊಳ್ತಿರಲಿಲ್ಲ,  ಇಷ್ಟುದ್ದ ಬರಿತಾನೂ ಇರಲ್ಲಿಲ್ಲ, ನಿಮಗೆ ಓದೋ ಕಷ್ಟಾನೂ ತಪ್ತಿತ್ತು (ನೀವು ಇಲ್ಲಿವರೆಗೂ ಓದಿದ್ರೆ, ಓದೋ ಹಾಗೆ ನಾನು ಬರ್ದಿದ್ರೆ  ;-))   

ಸರಿ ಇಷ್ಟೆಲ್ಲಾ ಬರೆಯೋ ಹೊತ್ತಿಗೆ ರೆಡ್ ಎಫ್ ಎಂ ನಲ್ಲಿ ಕಿಶೋರ್ ಕುಮಾರನ 'ಪಲ್ ಪಲ್ ದಿಲ್ ಕೆ ಪಾಸ್' ಹಾಡು ಪ್ರಸಾರವಾಗ್ತಿತ್ತು. ಆ ಹಾಡಿನ ಒಂದು ಸಾಲು,  'ಮೇ ಸಾಸ್ ಲೇತಾ ಹೂಂ,  ತೇರೀ ಖುಷ್ಬೂ ಆತಿ ಹೇ ' ಅಂತ ಕೇಳ್ತಿದ್ದ ಹಾಗೆ ನಂಗೆ ಮತ್ತೆ ಆ ಮಳೆ ಬಂದಾಗಿನ ಸುವಾಸನೆ ಸೂಸಿತು. ನಿಮಗೆ?

8 comments:

 1. happy to read this blog... keep writing...enjoy maadi

  ReplyDelete
 2. ನಮ್ಮ ಹಳ್ಳಿಗಳಲ್ಲಿ ಮಳೆ ಬಂದರೆ ಊರಲ್ಲೆಲ್ಲ ಹಬ್ಬದ ವಾತಾವರಣ ಇರುತ್ತೆ. ಇದು ರೈತರಿಗೆ ಅಪರೂಪಕ್ಕೆ ಸಿಗುವ ಬಿಡುವಿನ ಸಮಯ. ಆ ಸಮಯಕ್ಕೆ ಕಾಫಿ ಜೊತೆ ಕಡಲೆ ಕಾಯಿ ಇದ್ದರೆ ಅದರ ಮಜಾನೆ ಬೇರೆ. ನಿನ್ನ ಬರಹ ನನ್ನನ್ನು ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಯಿತು. ದನ್ಯವಾದಗಳು.

  ReplyDelete
 3. ಆಗ ತಾನೇ ಜಾಮೂನ್ ತಿಂದು ಗಣಕ ಯಂತ್ರವನ್ನು ತೆರೆದೆ, ಆಗ ಬಂತು ಓಂದು ಇ-ಪತ್ರ ,
  ಅದು ನನ್ನ ಸ್ನೇಹಿತನ ಬ್ಲಾಗ್ ಆಗಿತ್ತು. ತುಂಬಾ ಖುಷಿಯಾಗಿ ಅದನ್ನು ತೆರೆದೆ, ಓದಿದೆ ಅದರ ಹೆಡ್ ಲೈನ್ ನ್ನು , ಏರಿತು ಓದುವ ಕಾತುರ , ಓದಿದೆ ಓದಿದೆ, ನೆನಪಾಯಿತು ಚಿಕ್ಕಂದಿನ ಬಾಲ್ಯ, ಸುಮಾರು ಹತ್ತು ವರುಷಗಳ ಹಿಂದಿನ ನೆನಪು ಮರುಕಳಿಸಿ ಬಂತು, ಮತ್ತೆ ಬಾರದು ಆ ಸವಿ ದಿನಗಳು, ಆದರೆ ಸಿಕ್ಕಿತು ಸವಿನೆನಪುಗಳ ಜೊತೆಯಲಿ ಇ ಬ್ಲಾಗು , ಧನ್ಯವಾದಗಳು ಆ ನನ್ನ ಸ್ನೇಹಿತನಿಗೆ, ಧನ್ಯವಾದಗಳು ಆ ನನ್ನ ಸ್ನೇಹಿತನಿಗೆ.

  ReplyDelete
 4. ಮೊದಲ ಮಳೆಯ ಸ್ಪರ್ಶ ಚೆಂದ
  ಸವಿಯೋಕೆ ಆ ಮಣ್ಣಿನ ಸುವಾಸನೆಯೋ, ಇನ್ನು ಚೆಂದ
  ನಿಮ್ಮ ಆ ಅನುಭವದೊಂದಿಗೆ ನಮಗೆ ಆ ಸುವಾಸನೆಯ ನೆನಪು ತಂದುಕೊಟ್ಟದಕ್ಕೆ ಧನ್ಯವಾದಗಳು .
  ಹಾ ಮತ್ತೊಂದ ಮಾತು , ನೀವು ಮೇಲೆ ಹೇಳಿದ್ದು ಹೀಗೆ " ನಿಸರ್ಗ ಇಷ್ಟು ತಾರತಮ್ಯ ಮಾಡೋದು ... " ಎಲ್ಲದಕ್ಕೂ ಈ ಮನುಷ್ಯ ಪ್ರಾಣಿಯೇ ಕಾರಣ ಏನಂತಿರಾ?

  ReplyDelete
 5. Title swalpa confuse aagide.. neevu describe maadtirodu "suvasane ya male" you athava "male ya suvasane" yo? ;-) ;-)

  ReplyDelete
 6. many write, trying to find a complicated word and present in a very different way. Reading this i just felt some one sitting with a cup of coffee next to window and telling from heart.. what he saw.. Amazingly simple yet nice!!

  ReplyDelete
 7. I want your cotact number so that I can get help from you in the matter of blog (Kannada) publishing. Can a blog in Kannada be published even in such a system that does not have the type of font in which the blog has been published. What I mean is, if an article is typed in Kannada Baraha font and published, can the same be published in a system which does not support the font? Can a blog in Kannada be published everywhere irrespective of the type of of font it has publsihed in?

  ReplyDelete