January 26, 2010

ಸುವಾಸನೆಯ ಮಳೆ

ಡಿಸೆಂಬರಿನ ಒಂದು ದಿನ ಬೆಳೆಗ್ಗೆ ಸುಮಾರು 6-6:30ಕ್ಕೆ ಮಳೆರಾಯನಿಗೆ ಏನಾಯ್ತೋ ಏನೋ ನಮಗೆಲ್ಲ ಒಂದು ಶಾಕ್ ಕೊಡಲಿಕ್ಕೆ ಅಂತ ಭೂಮಿಗೆ ವಿಹಾರಕ್ಕೆ ಬಂದ. ಅದೂ ತನ್ನ ಸಂಸಾರ ಸಮೇತ (ಗುಡುಗು, ಸಿಡಿಲು). ಶಾಕ್ ಯಾಕೆ ಅಂತ ಅಂದ್ರೆ ಇಲ್ಲಿ ಉಡುಪಿಲಿ ಎಷ್ಟೇ ಜಾಸ್ತಿ ಮಳೆ ಇದ್ರೂ ತೀರಾ ಡಿಸೆಂಬರಲ್ಲಿ ಮಳೆ ಬರಲ್ಲ. ಆದ್ರೆ ಅವತ್ತು ಬಂತು. ಆಗಾಗಲೇ ಎದ್ದಿದ್ದ ನಾನು ಕಿಟಿಕಿ ಆಚೆ ನೋಡಿದೆ. ಸುರಿಯುತ್ತಿದ್ದ ಮಳೆಗೆ ನೆನೆಯುತ್ತಿದ್ದ ನೆಲ ಕಾಣಿಸ್ತು. ಅಷ್ಟೇ ಅಲ್ದೇ ಮಳೆ ಬರುವಾಗ ಅದರ ಜೊತೆ ತರುವ ಮಣ್ಣಿನ ಸುವಾಸನೆಯೂ ಬಂತು.

ಉಡುಪಿಯ ಮೂರುವರೆ ವರ್ಷದ ವಾಸದಲ್ಲಿ ಈ ಮಣ್ಣಿನ ಸುವಾಸನೆ ಬಂದಿದ್ದು ತೀರ ಅಪರೂಪ. ನನ್ನ ನೆನಪಿನ ಮಟ್ಟಿಗೆ ಇದು ನನ್ನ ಮೊದಲ ಅನುಭವ. ಅದಕ್ಕೆ ನನಗೆ ಆ ಮಣ್ಣಿನ ಸುವಾಸನೆ ಬರ್ತಿದ್ದ ಹಾಗೇನೆ  ಬಳ್ಳಾರಿಯ ನೆನೆಪಾಯಿತು. ಯಾಕಂದ್ರೆ ಅಲ್ಲಿ ಪ್ರತಿ ಮಳೆಯ ಜೊತೆಗೂ ಈ ಸುವಾಸನೆ ಇರತ್ತೆ. ಅಲ್ಲಿನ  ಬಿಸಿಯಾದ ಭೂಮಿಗೆ ಮಳೆಯ ಮೊದಲ ಕೆಲವು ಹನಿಗಳ ಸ್ಪರ್ಶಕ್ಕೆ ಖುಷಿ ಅಷ್ಟಿಷ್ಟಲ್ಲ, ಅದಕ್ಕಾಗೋ ಖುಷಿಗೆ ಭೂಮಿ ನಮಗೆಲ್ಲ ಸುವಾಸನೆಯನ್ನು ಪ್ರಸಾದಿಸುತ್ತೆ.


ಎಲ್ರಿಗೂ ತಿಳಿದಿರೋ ಹಾಗೆ ಬಳ್ಳಾರಿಯಲ್ಲಿ ಉಡುಪಿಗಿಂತ ತೀರ ಕಡಿಮೆ ಮಳೆ. ಇಲ್ಲಿಗೂ ಅಲ್ಲಿಗೂ ಮಳೆಯ ಪ್ರಮಾಣ ಹೋಲಿಸೋದೆ ದಡ್ಡತನ. ಮನೆಗೆ ಯಾವಾಗಲೋ ಬರುವ ಅತಿಥಿಯಿಂದ ಆಗೋ ಸಂತೋಷವೇ ಬೇರೆ. ಆ ಥರದ ಖುಷಿ ಬಳ್ಳಾರಿಯ ಮಣ್ಣಿಗಾಗೋದರಿಂದ ಆ ಸಂತೋಷನಾ ಅಲ್ಲಿಯ ಮಣ್ಣು ಇಡೀ ಊರಿಗೆ ಹಂಚುತ್ತೆ, ಸುವಾಸನೆಯ ರೂಪದಲ್ಲಿ.

ಇಲ್ಲಿ ಮಳೆ ಯಾರಿಗೂ ಹೊಸತಲ್ಲ. ಅದಕ್ಕಾಗಿ ಯಾರೂ ಕಾಯೋಲ್ಲ. ಮಳೆ ಬಂದ್ರೆ ಇಲ್ಲಿ ಅಂತಹದ್ದು ಆಗಬಾರದ್ದೇನು ಆಗೋಲ್ಲ. ಅಲ್ಲಿ ಇಲ್ಲಿಯ ಉಲ್ಟಾ. ಅಲ್ಲಿ ಮಳೆ ಬಂದ್ರೆ ಇಡೀ ಊರಿಗೆ ಊರೇ ಕೆಲಸ ನಿಲ್ಲಿಸಿಬಿಡುತ್ತೆ. ಜನರ ಜೀವನಾನೆ  ಮುಂದೆ ಸಾಗೋಲ್ಲ.  ಆಹೊತ್ತಿನ  ಎಲ್ಲ ಕೆಲಸ ಕಾರ್ಯಗಳನ್ನು ಸ್ವಲ್ಪ ಹೊತ್ತು ಮುಂದೂಡಿ, ಮಂಡಾಳು  ವಗ್ಗರಣಿ, ಮಿರ್ಚಿ ಮಾಡ್ಕೊಂಡು (ಅಥವಾ ಕೊಂಡ್ಕೊಂಡು)  ಜನ ಮಳೇನ ಆನಂದಿಸ್ತಾರೆ. ಅದರ ಜೊತೆ ಮಳೆಯ ಸುವಾಸನೇನೂ ಸವಿತಾರೆ.
ಇಲ್ಲಿ ಮಳೆ ಬಂದ್ರೆ ನಿಲ್ಲಲ್ಲ ಅಂತ ಯಾರೂ ಅದರ ಬಗ್ಗೆ ತಲೆ ಕೆಡಿಸಕೊಳ್ಳದೆ ತಂತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಒಂಥರ ಇಲ್ಲಿ ಮಳೆಗೆ ಅಲ್ಲಿಯ ಜನ ಕೊಡುವಷ್ಟು ಮರ್ಯಾದೆ, ಬೆಲೆ ಇಲ್ಲ, ಅದಕ್ಕೆ ಸುವಾಸನೆಯ ಪ್ರಸಾದ ಯಾರಿಗೂ ಇಲ್ಲ.

ಇಲ್ಲಿ ಅಷ್ಟೊಂದು ಮಳೆ ಬೇಡ, ಅಲ್ಲಿ ಅಷ್ಟು ಮಳೆ ಸಾಕಾಗಲ್ಲ (ಈ ಬಾರಿಯ ನೆರೆ ಹೊರತುಪಡಿಸಿದರೆ ಪ್ರತಿ ಬಾರಿನೂ ಅಲ್ಲಿ ಜನಕ್ಕೆ ಬೇಕಾಗೊಕ್ಕಿಂತ ಕಮ್ಮೀನೇ ಬರೋದು. ಈ ಬಾರಿಯ ಥರದ ಮಳೆ ಇನ್ನೆಂದಿಗೂ ಬೇಡ ಕೂಡ). ನಿಸರ್ಗ ಇಷ್ಟು ತಾರತಮ್ಯ ಮಾಡೋದು ಬಿಟ್ಟು ಇಲ್ಲಿ ಸ್ವಲ್ಪ ಮಳೆ ಕಡಿಮೆ ಮಾಡಿ, ಅಲ್ಲಿ ಸ್ವಲ್ಪ ಮಳೆ ಜಾಸ್ತಿ ಮಾಡಿದ್ರೆ ಎಷ್ಟು ಚೆನ್ನಾಗಿರುತಿತ್ತು ಅಲ್ವಾ?
ಹಾಗಿದ್ದಿದ್ರೆ ಜನರ ಜೀವನ ಆರಾಮಗಿರೋದು.  ಆ ಸುವಾಸನೇನ ನಾನು ನೆನಸಕೊಳ್ತಿರಲಿಲ್ಲ,  ಇಷ್ಟುದ್ದ ಬರಿತಾನೂ ಇರಲ್ಲಿಲ್ಲ, ನಿಮಗೆ ಓದೋ ಕಷ್ಟಾನೂ ತಪ್ತಿತ್ತು (ನೀವು ಇಲ್ಲಿವರೆಗೂ ಓದಿದ್ರೆ, ಓದೋ ಹಾಗೆ ನಾನು ಬರ್ದಿದ್ರೆ  ;-))   

ಸರಿ ಇಷ್ಟೆಲ್ಲಾ ಬರೆಯೋ ಹೊತ್ತಿಗೆ ರೆಡ್ ಎಫ್ ಎಂ ನಲ್ಲಿ ಕಿಶೋರ್ ಕುಮಾರನ 'ಪಲ್ ಪಲ್ ದಿಲ್ ಕೆ ಪಾಸ್' ಹಾಡು ಪ್ರಸಾರವಾಗ್ತಿತ್ತು. ಆ ಹಾಡಿನ ಒಂದು ಸಾಲು,  'ಮೇ ಸಾಸ್ ಲೇತಾ ಹೂಂ,  ತೇರೀ ಖುಷ್ಬೂ ಆತಿ ಹೇ ' ಅಂತ ಕೇಳ್ತಿದ್ದ ಹಾಗೆ ನಂಗೆ ಮತ್ತೆ ಆ ಮಳೆ ಬಂದಾಗಿನ ಸುವಾಸನೆ ಸೂಸಿತು. ನಿಮಗೆ?

January 08, 2010

ಕನಸಿನಾರಂಭ

ತೆರೆದಿದೆ ಮನೆ ಓ ಬಾ ಅತಿಥಿ,
ಹೊಸ ಬೆಳಕಿನ, ಹೊಸ ಗಾಳಿಯಾ, ಹೊಸ ಬಾಳನು ತಾ ಅತಿಥಿ.

ನನಗೆ ತುಂಬಾ ಇಷ್ಟವಾದ ಸಾಲುಗಳು ಇವು. ರಾಷ್ಟ್ರಕವಿ ಕುವೆಂಪು ರಚನೆಯ ಈ  ಕವಿತೆಯನ್ನು 'ಹೊಸಬೆಳಕು' ಚಿತ್ರದಲ್ಲಿ ಉಪಯೋಗಿಸ್ಕೊಂಡಿದ್ದಾರೆ, ಎಂ ರಂಗರಾವ್ ಅವರ ಅದ್ಭುತ ಸಂಗೀತ ಹಾಗೂ ಎಸ್ ಜಾನಕಿ ಮತ್ತು ವಾಣಿ ಜಯರಾಂ ಅವರ ಮಧುರಾತಿಮಧುರ ಕಂಠದಿಂದ ಬಂದ ಈ ಹಾಡನ್ನು ಕೇಳ್ತಾ ಇದ್ರೆ ಎಂಥವನ ಮನಸ್ಸಿನಲ್ಲೂ  ಹೊಸ ಬೆಳಕು ಮೂಡಿ, ತಂಪು ಗಾಳಿ ಬೀಸಲು ಶುರುವಿಡುತ್ತದೆ.

ಒಂದು ಬ್ಲಾಗೇನಾದ್ರೂ ಶುರು ಮಾಡಿದ್ರೆ ಅದಕ್ಕೆ ಒಂದೆರಡು ಒಳ್ಳೆಯ ಆರಂಭಿಕ ಸಾಲುಗಳು ಇರಲಿ ಅಂತ ಅನ್ನಿಸ್ತು. ಅದಕ್ಕೆ ಈ ಸಾಲುಗಳನ್ನು ಸಾಲ ಪಡೆದು ಈ ಬ್ಲಾಗನ್ನು ಶುರು ಮಾಡ್ತಾ ಇದ್ದೀನಿ.
ಇಲ್ಲಿ ನನ್ನ ಅಭಿಪ್ರಾಯಗಳು, ಯೋಚನೆಗಳು, ಇಷ್ಟಾನಿಷ್ಟಗಳು, ಇತ್ಯಾದಿಗಳನ್ನು ಬರೆದು ನನ್ನ  ಧರ್ಮ-ಕರ್ಮಗಳನ್ನು ಪಾಲಿಸುತ್ತೇನೆ. ನೀವೆಲ್ಲ ಓದಿ, ಅವುಗಳಿಗೆ ನೀವು ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ತಿಳಿಸ್ತಾ ಇರಿ.

ಅಬ್ಬ!! ಕೊನೆಗೂ ನಾನೊಬ್ಬ ಬ್ಲಾಗಿಗನಾದೆ. :-)